ಪ್ರೈಮೇಟ್
From Wikipedia, the free encyclopedia
ಪ್ರೈಮೇಟ್[2] ಸಸ್ತನಿ ವರ್ಗದ ಪ್ರಾಣಿಗಳ ಒಂದು ಗಣ (ಆರ್ಡರ್). ಈ ಗಣದ ಟ್ಯಾಕ್ಸಾನಮಿಯಲ್ಲಿ (ಜೀವ ವರ್ಗೀಕರಣಶಾಸ್ತ್ರ) ಎರಡು ವಿಭಿನ್ನ ವಂಶಾವಳಿಗಳಿದ್ದು ಅವು ಸ್ಟ್ರೆಪ್ಸಿರ್ಹಿನಿ ಮತ್ತು ಹಾಪ್ಲೊರ್ಹಿನಿ.[1] ಪ್ರೈಮೇಟ್ಗಳು ಉಷ್ಣವಲಯದ ಕಾಡುಗಳಲ್ಲಿ ಬದುಕುತ್ತಿದ್ದ ಜೀವಿಗಳಿಂದ ವಿಕಾಸವಾದವು ಮತ್ತು ಹಲವು ಪ್ರೈಮೇಟ್ಗಳ ಗುಣಗಳು ಇಲ್ಲಿಯ ಮೂರು ಆಯಾಮಗಳ ಸವಾಲಾದ ಪರಿಸರಕ್ಕೆ ಹೊಂದಿಕೊಂಡ ಗುಣಗಳನ್ನು ಪ್ರತಿನಿಧಿಸುತ್ತವೆ. ಪ್ರೈಮೇಟ್ಗಳಲ್ಲಿ ಬಹಳಷ್ಟು ಮರವಾಸಿಗಳು.
ಕೆಲವು ಪ್ರೈಮೇಟ್ ಕುಟುಂಬಗಳು ಮೇಲಿನಿಂದ ಕೆಳಗೆ: ಡಾಬೆಂಟೊನಿಡೆ, ಟಾರ್ಸಿಡೆ, ಲೆಮುರಿಡೆ, ಲಾರ್ಸಿಡೆ, ಸೆಬಿಡೆ, ಅಟೆಲಿಡೆ, ಸೆರ್ಕೊಪಿತೆಸಿಡೆ, ಹೈಲೊಬಟಿಡೆ, ಹೋಮಿನಿಡೆ | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | ಪ್ರಾಣಿ |
ವಂಶ: | ಕಾರ್ಡೇಟ |
ಕ್ಲಾಡ್: | ಸಿನಾಪ್ಸಿಡ |
ವರ್ಗ: | ಸಸ್ತನಿ |
ಮಿರ್ಗಣ: | ಪ್ರೈಮಟೊಮಾರ್ಪ |
ಗಣ: | ಪ್ರೈಮೇಟ್ |
(ಕಾರ್ಲ್ ಲಿನ್ನೇಯಸ್, ೧೭೫೮)[1] | |
ಕುಟುಂಬಗಳು | |
ವರ್ಗೀಕರಣ ವಿಭಾಗ ನೋಡಿ | |
ಮಾನವೇತರ ಪ್ರೈಮೇಟ್ಗಳ ಹಂಚಿಕೆ |
ಅಂಟಾರ್ಕಿಟಿಕ ಹೊರತು ಪಡಿಸಿ ಎಲ್ಲಾ ಖಂಡಗಳಲ್ಲಿ ವಾಸಿಸುವ ಮಾನವರನ್ನು ಹೊರತು ಪಡಿಸಿದರೆ[3] ಇತರ ಬಹಳಷ್ಟು ಪ್ರೈಮೇಟ್ಗಳು ಎರಡು ಅಮೆರಿಕ, ಆಫ್ರಿಕಾ ಮತ್ತು ಏಶಿಯದ ಉಷ್ಣವಲಯ ಮತ್ತು ಅರೆಉಷ್ಣವಲಯದ ಕಾಡುಗಳಲ್ಲಿ ವಾಸಿಸುತ್ತವೆ.[4] ಅವುಗಳ ಗಾತ್ರದ ವ್ಯಾಪ್ತಿ ೩೦ ಗ್ರಾಂ ತೂಗುವ ಮೇಡಂ ಬರ್ತೆಯ ಇಲಿ ಲೆಮುರ್ನಿಂದ ೨೦೦ ಕಿಲೊಗ್ರಾಂ ತೂಗುವ ಪೂರ್ವ ಗೊರಿಲ್ಲಗಳವರೆಗೂ ಇದೆ. ಪಳಿಯುಳಿಕೆಗಳ ಪುರಾವೆಗಳ ಆಧಾರದ ಮೇಲೆ ಹೇಳುವುದಾದರೆ ಮೊದಲ ನಿಜ ಪ್ರೈಮೇಟ್ ಟೆಯಿಲ್ಹಾರ್ಡಿನ ಕುಲದ ಕಾಲಮಾನ ೫೫.೮ ದಶಲಕ್ಷ ವರುಷಗಳ ಹಿಂದೆ (ದವಹಿಂ).[5] ತಡವಾದ ಪಾಲಿಯೋಸಿನ್, ೫೫-೫೮ ದವಹಿಂನ ಕಾಲಮಾನದಲ್ಲಿ ಬಹಳ ಹೆಚ್ಚಾಗಿ ಕಂಡುಬರುವ ಪ್ರೈಮೇಟ್ನ ಹತ್ತಿರದ ಸಂಬಂಧಿ ಪ್ಲೆಸಿಯಡಪಿಸ್.[6] ಅಣ್ವಿಕ ಗಡಿಯಾರದ ಅಧ್ಯಯನಗಳು ಪ್ರೈಮೇಟ್ ಕವಲು ಇನ್ನೂ ಹಳೆಯದು ಕ್ರೆಟೇಶಿಯಸ್ ಪಾಲಿಯೊಜೀನ್ ಗಡಿ ಅಥವಾ ೬೩ ರಿಂದ ೭೪ ದವಹಿಂನದು ಎಂದು ಸೂಚಿಸುತ್ತವೆ.[7][8][9][10]
ಗಣ ಪ್ರೈಮೇಟನ್ನು ಸಂಪ್ರದಾಯಿಕವಾಗಿ ಪ್ರೊಸಿಮಿಯನ್ ಮತ್ತು ಅಂತ್ರೊಪಾಯ್ಡ್ (ಸಿಮಿಯನ್) ಎಂದು ವಿಭಜಿಸಲಾಗುತ್ತಿತ್ತು. ಪ್ರೊಸಿಮಿಯನ್ಗಳು ಪ್ರಾಚೀನ ಪ್ರೈಮೇಟ್ಗಳನ್ನು ಹೋಲುತ್ತಿದ್ದು ಮಡಗಾಸ್ಕರನ ಲೆಮುರ್ಗಳನ್ನು, ಲೊರಿಸೊಯ್ಡ್ ಮತ್ತು ಟಾರ್ಸಿಯರ್ಗಳನ್ನು ಒಳಗೊಳ್ಳುತ್ತಿದ್ದವು. ಸಿಮಿಯನ್ಗಳು ಕೋತಿ, ವಾನರ ಮತ್ತು ಹೊಮಿನಿನ್ಗಳನ್ನು ಒಳಗೊಳ್ಳುತ್ತಿದ್ದವು. ಆದರೆ ಇತ್ತೀಚೆಗೆ ಟಾಕ್ಸಾನಮಿ ತಜ್ಞರು ತೇವಾಂಶದ ಮೂಗಿನ ಗುಂಪಾದ ಉಪಗಣ ಸ್ಟ್ರೆಪ್ಸಿರ್ಹಿನಿ (ಟಾರ್ಸಿಯರ್ ಅಲ್ಲದ ಪ್ರೊಸಿಮಿಯನ್ಗಳನ್ನು ಈ ಗುಂಪು ಒಳಗೊಳ್ಳುತ್ತದೆ) ಮತ್ತು ಒಣ ಮೂಗಿನ ಟಾರ್ಸಿಯರ್ ಹಾಗೂ ಸಿಮಿಯನ್ಗಳಿರುವ ಉಪಗಣ ಹಾಪ್ಲೊರ್ಹಿನಿಯಾಗಿ ವಿಭಜಿಸಲು ಬಯಸುತ್ತಾರೆ.
ಸಿಮಿಯನ್ಗಳನ್ನು ಮುಂದೆ ಕಿರಿಮೂಗಿನ ಕೋತಿಗಳು (ಹಳೆಯ ಪ್ರಪಂಚದ ಕೋತಿಗಳು), ಆಫ್ರಿಕಾ ಮತ್ತು ಆಗ್ನೇಯದ (ದಕ್ಷಿಣ-ಪೂರ್ವ) ವಾನರಗಳನ್ನು ಒಳಗೊಳ್ಳುವ ಕಾಟರ್ಹಿನಿ ಮತ್ತು ದಕ್ಷಿಣ ಹಾಗೂ ಮಧ್ಯ ಅಮೆರಿಕದಲ್ಲಿರುವ ಚಪ್ಪಟೆಮೂಗಿನ ಕೋತಿಗಳನ್ನು (ಹೊಸ ಪ್ರಪಂಚದ ಕೋತಿಗಳು) ಒಳಗೊಳ್ಳುವ ಪ್ಲಾಟಿರ್ಹಿನಿಯಾಗಿ ವಿಭಜಿಸಿದ್ದಾರೆ. ಕಾಟರ್ಹಿನಿ ಹಳೆಯ ಪ್ರಪಂಚದ ಕೋತಿ, ಗಿಬ್ಬಾನ್ ಮತ್ತು ದೊಡ್ಡ ವಾನರಗಳನ್ನೂ ಒಳಗೊಳ್ಳುತ್ತವೆ. ಹೊಸ ಪ್ರಪಂಚದ ಕೋತಿಗಳು ಕಾಪುಚಿನ್, ಊಳು ಕಪಿ ಮತ್ತು ಅಳಿಲು ಕೋತಿಯನ್ನು ಒಳಗೊಳ್ಳುತ್ತದೆ. ಆಫ್ರಿಕಾ, ದಕ್ಷಿಣ ಏಶಿಯ ಮತ್ತು ಪೂರ್ವ ಏಶಿಯದ ಹೊರಗಡೆ ಬದುಕಿರುವ ಏಕೈಕ ಕಾಟರ್ಹಿನಿ ಮಾನವ. ಆದರೆ ಹಿಂದೆ ಯುರೂಪಿನಲ್ಲಿಯೂ ಕಾಟರ್ಹಿನಿಗಳು ಇದ್ದವು ಎಂದು ಪಳಿಯುಳಿಕೆಯು ನಮಗೆ ಸುಳಿವು ನೀಡುತ್ತದೆ. ಹೊಸ ಪ್ರೈಮೇಟ್ಗಳನ್ನು ಇನ್ನೂ ಗುರುತಿಸಲಾಗುತ್ತಿದೆ. ೨೦೦೦ದ ದಶಕದಲ್ಲಿ ೨೫ ಪ್ರಭೇದಗಳ ಜೀವ ವರ್ಗೀಕರಣ ಮಾಡಲಾಯಿತು ಮತ್ತು ೨೦೧೦ ರಿಂದ ಇಲ್ಲಿಯವರೆಗೆ ೧೧ ಪ್ರೈಮೇಟ್ಗಳನ್ನು ವಿವರಿಸಲಾಗಿದೆ.
ಸೀಮಿತವಲ್ಲದ ಸಸ್ತನಿಗಳು ಎಂದು ಪರಿಗಣಿಸಲಾದ ಪ್ರೈಮೇಟ್ಗಳು ವ್ಯಾಪಕ ಗುಣ ವ್ಯತ್ಯಾಸಗಳನ್ನು ಪ್ರತಿನಿಧಿಸುತ್ತವೆ. ಮಾನವ ಮತ್ತು ಬಬೂನ್ಗಳಂತೆ ಕೆಲವು ಮೂಲತಹ ಭೂವಾಸಿಗಳಾದರೆ ಎಲ್ಲ ಪ್ರೈಮೇಟ್ಗಳು ಮರ ಹತ್ತಲು ಹೊಂದಾಣಿಕೆ ಪಡೆದಿವೆ. ಇವುಗಳ ಚಲನೆಯ ಸ್ವರೂಪ- ಮರದಿಂದ ಮರಕ್ಕೆ ಹಾರುವುದು, ಎರಡು ಅಥವಾ ನಾಲ್ಕು ಕಾಲುಗಳ ಮೇಲೆ ನಡೆಯುವುದು, ಗೆಣ್ಣುಗಳ ಮೇಲೆ ನಡಿಗೆ ಮತ್ತು ಬಾಹುಗಮನ (ಕೊಂಬೆಯಿಂದ ಕೊಂಬೆಗೆ ತೂಗಾಡುತ್ತಾ ಸಾಗುವುದು).
ಪ್ರೈಮೇಟ್ಗಳ ಮಿದುಳು ಇತರ ಸಸ್ತನಿಗಳಿಗೆ ಹೋಲಿಸಿದರೆ ದೊಡ್ಡದು. ಅವುಗಳಲ್ಲಿ ಇತರ ಸಸ್ತನಿಗಳಲ್ಲಿ ಪ್ರಮುಖವಾದ ವಾಸನೆ ಶಕ್ತಿ ಕುಗ್ಗುತ್ತದೆ ಮತ್ತು ಮೂರು ಆಯಾಮಗಳ ನೋಟದ ಮಹತ್ವ ಹೆಚ್ಚಾಗುತ್ತದೆ. ಈ ಲಕ್ಷಣ ಲೋರಿಸ್ ಮತ್ತು ಲೆಮುರ್ಗಳಿಗಿಂತ ಕೋತಿಗಳು ಮತ್ತು ವಾನರಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಮೂರು ಬಣ್ಣಗಳ ನೋಟ ಕೆಲವು ಪ್ರೈಮೇಟ್ಗಳಲ್ಲಿ ವಿಕಾಸವಾಗಿದೆ. ಬಹಳಷ್ಟು ಪ್ರೈಮೇಟ್ಗಳಲ್ಲಿ ಕೈಯ ಹೆಬ್ಬರಳು ವಿರುದ್ಧ ದಿಕ್ಕಿನಲ್ಲಿದೆ ಮತ್ತು ಕೆಲವದರಲ್ಲಿ ಗ್ರಾಹಕ ಬಾಲ ಇದೆ. ಇವುಗಳಲ್ಲಿ ಲೈಂಗಿಕ ದ್ವಿರೂಪತೆ (ಹೆಣ್ಣು ಮತ್ತು ಗಂಡುಗಳಲ್ಲಿನ ವ್ಯತ್ಯಾಸ) ಇದ್ದು ಅದು ದೇಹದ ಗಾತ್ರ, ಕೋರೆಹಲ್ಲಿನ ಗಾತ್ರ ಮತ್ತು ಬಣ್ಣಗಳಲ್ಲಿನ ವ್ಯತ್ಯಾಸವನ್ನು ಒಳಗೊಂಡಿದೆ. ವಯಸ್ಕ ಜೀವಿಗಳು ಒಂದೇ ಬದುಕ ಬಹುದು, ಲೈಂಗಿಕ ಜೋಡಿಗಳಲ್ಲಿ ಬದುಕ ಬಹುದು ಅಥವಾ ನೂರರವರೆಗಿನ ಸಂಖ್ಯೆಯ ಗುಂಪುಗಳಲ್ಲಿಯೂ ಬದುಕ ಬಹುದು. ಇದು ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರ ಬಹುದು.