ರೋಗ
From Wikipedia, the free encyclopedia
ರೋಗವು ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿ, ಒಂದು ರಚನೆ ಅಥವಾ ಕ್ರಿಯೆಯ ಅಸ್ವಸ್ಥತೆ.[1] ಯಾವುದಾದರೊಂದು ಪೆಟ್ಟು ಇಲ್ಲವೆ ಗಾಯದಿಂದ ಪ್ರಚೋದನೆಗೊಂಡಿರುವ, ಉಪಕೋಶೀಯ ಮಟ್ಟದಲ್ಲಿ ಸಂಭವಿಸುವ, ಗಾಸಿಗೆ ಈಡಾಗಿರುವ ಜೀವಿಯ (ಮನುಷ್ಯ ಇಲ್ಲವೆ ಪ್ರಾಣಿ) ವ್ಯತ್ಯಸ್ತರಚನೆಯಲ್ಲೊ ಕಾರ್ಯದಲ್ಲೊ ಸಾಮಾನ್ಯವಾಗಿ ಪ್ರಕಟಗೊಳ್ಳುವ ಪ್ರತಿಸ್ಪಂದನ (ಡಿಸೀಸ್). ಕಾಯಿಲೆ, ಅಸ್ವಸ್ಥತೆ, ವ್ಯಾಧಿ, ಅನಾರೋಗ್ಯ ಮುಂತಾದವು ಪರ್ಯಾಯ ಪದಗಳು. ರೋಗದ ಅಧ್ಯಯನವನ್ನು ರೋಗವಿಜ್ಞಾನವೆಂದು ಕರೆಯಲಾಗುತ್ತದೆ ಮತ್ತು ಇದು ರೋಗನಿದಾನ ಶಾಸ್ತ್ರದ ಅಧ್ಯಯನವನ್ನು ಒಳಗೊಳ್ಳುತ್ತದೆ. ರೋಗವನ್ನು ಹಲವುವೇಳೆ ರೋಗಲಕ್ಷಣಗಳು ಮತ್ತು ವೈದ್ಯಕೀಯ ಚಿಹ್ನೆಗಳಿಗೆ ಸಂಬಂಧಿಸಿದ ವೈದ್ಯಕೀಯ ಸ್ಥಿತಿ ಎಂದು ಅರ್ಥೈಸಲಾಗುತ್ತದೆ. ಅದು ರೋಗಕಾರಕಗಳಂತಹ ಬಾಹ್ಯ ಅಂಶಗಳಿಂದ, ಅಥವಾ ಪ್ರತಿರಕ್ಷಣಾ ಶಕ್ತಿಯ ಕೊರತೆಯಂತಹ ವಿಶೇಷವಾಗಿ ಪ್ರತಿರಕ್ಷಣಾ ವ್ಯವಸ್ಥೆಯ ಆಂತರಿಕ ಅಪಸಾಮಾನ್ಯ ಕ್ರಿಯೆಗಳಿಂದ, ಅಥವಾ ಅಲರ್ಜಿಗಳು ಮತ್ತು ಸ್ವರಕ್ಷಣೆಯನ್ನು ಒಳಗೊಂಡಂತೆ ಅತಿಸೂಕ್ಷ್ಮತೆಯಿಂದ ಉಂಟಾಗಿರಬಹುದು.
ರೋಗವು ಆನುವಂಶೀಯತೆ, ಸೋಂಕು, ಆಹಾರ ಇಲ್ಲವೆ ಪರಿಸರದ ಪರಿಣಾಮದಿಂದ ಉಂಟಾಗುವ, ದೋಷಯುಕ್ತ ಕ್ರಿಯೆಯಿಂದ ಕೂಡಿದ ದೇಹದ ಅಂಗ, ಅಂಗಭಾಗ, ರಚನೆ ಅಥವಾ ವ್ಯವಸ್ಥೆಯ ಒಂದು ಪ್ರಕಟಿತ ಲಕ್ಷಣ.[2] ರೋಗಗಳಿಗೆ ಇರುವ ಮೂಲಕಾರಣಗಳು ಜೀವಕೋಶದ ಒಳಗೇ ನಡೆಯುವ ಜೀವರಾಸಾಯನಿಕ ಮತ್ತು ಜೀವಭೌತಪ್ರತಿಕ್ರಿಯೆಗಳನ್ನು ಆಧರಿಸಿವೆ ಎಂಬುದು ಈಗಾಗಲೇ ನಡೆದಿರುವ ಸೂಕ್ಷ್ಮಸಂವೇದೀ ಶೋಧನೆಗಳಿಂದಲೂ ಅಭಿವರ್ಧನೆಗಳಿಂದಲೂ ಸ್ಪಷ್ಟವಾಗಿದೆ. ಈ ಪ್ರತಿಕ್ರಿಯೆಗಳನ್ನು ವರ್ಗೀಕರಿಸಲಾಗಿದ್ದು ಕ್ರಮೇಣ ಅವುಗಳ ಕ್ರಿಯಾತಂತ್ರವನ್ನು ತಿಳಿದುಕೊಳ್ಳುವ ಪ್ರಯತ್ನಗಳೂ ನಡೆದಿವೆ.
ಮಾನವರಲ್ಲಿ, ರೋಗ ಪದವನ್ನು ಹಲವುವೇಳೆ ಸ್ಥೂಲವಾಗಿ ಪೀಡಿತ ವ್ಯಕ್ತಿಗೆ ನೋವು, ಅಪಸಾಮಾನ್ಯತೆ, ಸಂಕಟ, ಸಾಮಾಜಿಕ ಸಮಸ್ಯೆಗಳು, ಅಥವಾ ಸಾವನ್ನು ಉಂಟುಮಾಡುವ, ಅಥವಾ ಆ ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಹೋಲುವ ಸಮಸ್ಯೆಗಳನ್ನು ಉಂಟುಮಾಡುವ ಯಾವುದೇ ಸ್ಥಿತಿಯನ್ನು ಸೂಚಿಸಲು ಬಳಸಲಾಗುತ್ತದೆ. ಈ ವಿಶಾಲವಾದ ಅರ್ಥದಲ್ಲಿ, ಅದು ಕೆಲವೊಮ್ಮೆ ಗಾಯಗಳು, ಅಂಗವಿಕಲತೆಗಳು, ಅಸ್ವಸ್ಥತೆ, ಲಕ್ಷಣಕೂಟ, ಸೋಂಕುಗಳು, ಪ್ರತ್ಯೇಕಿತ ರೋಗಲಕ್ಷಣಗಳು, ವಕ್ರ ವರ್ತನೆಗಳು, ಮತ್ತು ರಚನೆ ಹಾಗೂ ಕ್ರಿಯೆಯ ವಿಲಕ್ಷಣ ಬದಲಾವಣೆಗಳನ್ನು ಒಳಗೊಳ್ಳುತ್ತದೆ. ರೋಗಗಳು ಜನರ ಮೇಲೆ ಕೇವಲ ಶಾರೀರಿಕವಾಗಿ ಅಲ್ಲದೆ, ಭಾವನಾತ್ಮಕವಾಗಿಯೂ ಪ್ರಭಾವ ಬೀರಬಲ್ಲವು, ಏಕೆಂದರೆ ರೋಗದಿಂದ ಪೀಡಿತವಾಗಿ ಅದರ ಜೊತೆ ಬಾಳುವುದು ಜೀವನದ ಬಗ್ಗೆ ಪೀಡಿತ ವ್ಯಕ್ತಿಯ ದೃಷ್ಟಿಕೋನವನ್ನು ಬದಲಿಸಬಹುದು.
ಜೀವಿಯೊಂದರಲ್ಲಿಯ ಕ್ರಿಯಾತ್ಮಕ ಸಮತೋಲನ ಮತ್ತು ಅದು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವ ಪ್ರಕ್ರಿಯೆಗಳಿಗೆ ಸಮನಿಲುವೆ (ಹೋಮಿಯೋಸ್ಟೇಸಿಸ್) ಎಂದು ಹೆಸರು. ಇಲ್ಲಿ ಒಂದು ಪ್ರಸಾಮಾನ್ಯ ಪರಿಮಿತಿ ಉಂಟು. ಈ ಪರಿಮಿತಿಯ ಆಚೀಚೆಗೆ ಜೀವಕೋಶಗಳು ದಬ್ಬಲ್ಪಟ್ಟಾಗ ಅವುಗಳ ರಚನೆಯಲ್ಲಿ ಇಲ್ಲವೆ ಕಾರ್ಯದಲ್ಲಿ ಚ್ಯುತಿ ಏರ್ಪಡಬಹುದು. ಇಂಥ ಚ್ಯುತಿಗಳು ವಿಪರ್ಯಯಶೀಲವೋ (ರಿವರ್ಸಿಬಲ್) ಅವಿಪರ್ಯಯಶೀಲವೋ (ರ್ರಿವರ್ಸಿಬಲ್) ಆಗಿರಬಹುದು. ಎರಡನೆಯ ಬಗೆಯದ್ದಾದರೆ ಆ ಕೋಶಗಳು ಮಡಿಯುತ್ತವೆ. ಹೀಗಾಗಿ ವ್ಯತ್ಯಸ್ತ ಅಂಗಾಂಶಗಳು, ಅಂಗಗಳು ಮತ್ತು ಈ ಕಾರಣದಿಂದಾಗಿ ಜೀವಿಗಳಲ್ಲಿ ಉಪಕೋಶೀಯ ಬದಲಾವಣೆಗಳು ಅನುರಣಿಸಿ ಅಸ್ವಾಸ್ಥ್ಯ ತಲೆದೋರುತ್ತದೆ.[3]