ಕುದುರೆ
ಒಂದು ಪ್ರಾಣಿ / From Wikipedia, the free encyclopedia
ಕುದುರೆಯು (ಎಕೂಸ್ ಫ಼ೆರೂಸ್ ಕಬಾಲೂಸ್)[2][3] ಎಕೂಸ್ ಫ಼ೆರೂಸ್ ಅಥವಾ ಕಾಡು ಕುದುರೆಯ ಎರಡು ಅಸ್ತಿತ್ವದಲ್ಲಿರುವ ಉಪಪ್ರಜಾತಿಗಳ ಪೈಕಿ ಒಂದು. ಅದು ಜೀವಿವರ್ಗೀಕರಣ ಕುಟುಂಬ ಎಕ್ವಿಡೈಗೆ ಸೇರಿದ ಒಂದು ಬೆಸ ಕಾಲ್ಬೆರಳುಗಳಿರುವ ಗೊರಸುಳ್ಳ ಸಸ್ತನಿ. ಕುದುರೆಯು ಕಳೆದ ೪೫ ರಿಂದ ೫೫ ಮಿಲಿಯ ವರ್ಷಗಳಲ್ಲಿ ಚಿಕ್ಕ ಬಹು ಕಾಲ್ಬರೆಳುಗಳುಳ್ಳ ಪ್ರಾಣಿಯಿಂದ ಇಂದಿನ ದೊಡ್ಡ, ಒಂಟಿ ಕಾಲ್ಬೆರಳಿನ ಪ್ರಾಣಿಯಾಗಿ ವಿಕಾಸಗೊಂಡಿದೆ.
ಏಕ ಖುರಗಳ ಗುಂಪಿಗೆ ಸೇರಿದ ಸ್ತನಿ; ಶಾಸ್ತ್ರೀಯನಾಮ ಈಕ್ವಸ್ ಕೆಬಲ್ಲಸ್. ಪ್ರಾಚೀನ ಕಾಲದಿಂದಲೂ ಕುದುರೆ ಮನುಷ್ಯನ ಜೀವನದೊಡನೆ ಹಾಸುಹೊಕ್ಕಾಗಿ ಬೆಸೆದು ಹೋಗಿದೆ. ಇತಿಹಾಸವೇ ಆಗಲಿ ನಾಗರಿಕತೆಯ ವಿಕಾಸದ ವಿಶ್ಲೇಷಣೆಯೇ ಆಗಲಿ ಕುದುರೆಯ ಪ್ರಸ್ತಾಪದ ವಿನಾ ಅಪೂರ್ಣ. ಅನಾಗರಿಕತೆಯಿಂದ ನಾಗರಿಕತೆಯೆಡೆಗಿನ ಮಾನವನ ನಡೆಯಲ್ಲಿ ಆತನ ಹೆಜ್ಜೆಯ ಗುರುತುಗಳೊಡನೆ ಕುದುರೆ ಗೊರಸಿನ ಗುರುತುಗಳೂ ಎರಕಗೊಂಡಿವೆ ಎಂಬ ಪ್ರಚಲಿತ ಹೇಳಿಕೆ ಈ ಕಾರಣದಿಂದ ಬಂದುದಾಗಿರಬೇಕು. ಭಾರ ಹೊರಲು, ಸವಾರಿ ಮಾಡಲು, ವ್ಯವಸಾಯದಲ್ಲಿ ನಾನಾ ಬಗೆಯ ಕೆಲಸಗಳನ್ನು ನಿರ್ವಹಿಸಲು ಕುದುರೆಯಂಥ ಉಪಯುಕ್ತ ಹಾಗೂ ಸರ್ವಶಕ್ತ ಪ್ರಾಣಿ ಇನ್ನೊಂದಿಲ್ಲ.