ವ್ಯತ್ಯಯನ
From Wikipedia, the free encyclopedia
ವ್ಯತ್ಯಯನವು[ಟಿಪ್ಪಣಿ 1] ಜೀವಿಯ ಜೀವಕೋಶದ ಅಥವಾ ವೈರಾಣುವಿನ ಅನುವಂಶಿಕ ಪದಾರ್ಥದಲ್ಲಿ ಆಗುವ ಬಹುತೇಕ ಶಾಶ್ವತ ಬದಲಾವಣೆ. ಎಲ್ಲಾ ಜೀವಿಗಳಲ್ಲಿನ ಅನುವಂಶಿಕ ಪದಾರ್ಥ ಡಿಎನ್ಎ, ಆದರೆ ಕೆಲವು ಹೆಚ್ಐವಿನಂತಹ ವೈರಾಣುಗಳಲ್ಲಿನ ಅನುವಂಶಿಕ ಪದಾರ್ಥವು ಆರ್ಎನ್ಎ ಆಗಿದೆ.[ಟಿಪ್ಪಣಿ 2] ಪ್ರಿಯಾನುಗಳೆಂದು ಕರೆಯಲಾದ ಸೋಂಕಿಗೆ ಕಾರಣವಾಗುವ ಪ್ರೋಟೀನುಗಳಿಗೂ ಇದು ಅನ್ವಯಿಸುತ್ತದೆ.[ಟಿಪ್ಪಣಿ 3] ಇಂಗ್ಲೀಶ್ನಲ್ಲಿ ಮ್ಯುಟೇಶನ್ ಎಂದು ಕರೆಯಲಾಗುವ ಇದನ್ನು ಕನ್ನಡದಲ್ಲಿ ಉತ್ಪರಿವರ್ತನೆ ಎಂದೂ ಸಹ ಕರೆಯಲಾಗುತ್ತದೆ.
ಈ ಬದಲಾವಣೆಗಳು ಆ ಜೀವಕೋಶ ಅಥವಾ ವೈರಾಣುವಿನಿಂದ ಬಂದ ಪೀಳಿಗೆಗೂ ಕೊಡಲ್ಪಡುತ್ತವೆ. ಸಾಮಾನ್ಯವಾಗಿ ಇಂತಹ ಬದಲಾವಣೆ ಜೀವಿಯ ಸಂತಾನೋತ್ಪತ್ತಿಯ ಜೀವಕೋಶಗಳನ್ನು ಉತ್ಪಾದಿಸುವ ಬೇರೆಯದೇ ವ್ಯವಸ್ಥೆಯಿರುವ (ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಜೀವಿಗಳು) ಜೀವಿಗಳಲ್ಲಾದರೆ ವ್ಯತ್ಯಯನವು ಜೀವಿಯ ಮುಂದಿನ ಸಂತತಿಗೆ ಕೊಡಲ್ಪಡುತ್ತದೆ ಮತ್ತು ಇದು ದೈಹಿಕ ಜೀವಕೋಶಗಳಲ್ಲಿ ಆದರೆ ಅದು ಆ ಜೀವಕೋಶದಿಂದ ಬಂದ ಎಲ್ಲಾ ಜೀವಕೋಶಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಬದಲಾವಣೆ ಒಟ್ಟಾರೆ ಜೀವಿಯ ಯಾ ವೈರಾಣುವಿನ ಜಿನೋಮ್ನಲ್ಲಿ ಆಗುವ ಬದಲಾವಣೆ. ಜಿನೋಮ್ ಎಂದರೆ ಜೀವಕೋಶದ ಅನುವಂಶಿಕ ಪದಾರ್ಥವು ವರ್ಣತಂತುಗಳ ಮೇಲಿರುವ ಡಿಎನ್ಎ ಅಲ್ಲದೆ ಮೈಟೊಕಾಂಡ್ರಿಯನ್ ಮತ್ತು ಹರಿದ್ರೇಣುಗಳಲ್ಲಿರುವ (ಕ್ಲೋರೋಪ್ಲಾಸ್ಟ್) ಡಿಎನ್ಎ ಸಹ ಅಂದರೆ ಜೀವಕೋಶದಲ್ಲಿರುವ ಒಟ್ಟಾರೆ ಅನುವಂಶಿಕ ಪದಾರ್ಥ.[ಟಿಪ್ಪಣಿ 4]
ವ್ಯತ್ಯಯನಗಳು ಹಲವು ರೀತಿಯಲ್ಲಿ ನ್ಯೂಕ್ಲಿಯೊಟೈಡ್ ಸರಣಿಗಳ ಬದಲಾವಣೆಗೆ ಕಾರಣವಾಗ ಬಹುದು. ಇಂತಹ ಬದಲಾವಣೆಯು ಅನುವಂಶಿಕ ಪದಾರ್ಥದ ಅನುಕ್ರಮದ ಒಂದು ಅಥವಾ ಕೆಲವು ನ್ಯೂಕ್ಲಿಯೊಟೈಡ್, ಡಿಎನ್ಎಯ ದೊಡ್ಡ ತುಣುಕಿನ ಬದಲಾವಣೆಯಿಂದ ಅಥವಾ ವರ್ಣತಂತುಗಳ ಅಥವಾ ಅದರ ಭಾಗದ ಮರುವ್ಯಸ್ಥೆಯಾಗುವುದರ ವರೆಗೂ ಇರುತ್ತದೆ. ವ್ಯತ್ಯಯನವು ವಂಶವಾಹಿ ಉತ್ಪಾದನೆಯನ್ನು[ಟಿಪ್ಪಣಿ 5] ಬದಲಾಯಿಸ ಬಹುದು ಅಥವಾ ಬದಲಾಯಿಸದೇ ಇರಬಹುದು ಅಥವಾ ವಂಶವಾಹಿಯನ್ನು ಸರಿಯಾಗಿ ಕಾರ್ಯನಿರ್ವಹಿಸದಂತೆ ತಡೆಯಬಹುದು ಅಥವಾ ಕೆಲಸಮಾಡದಂತೆಯೂ ಮಾಡಬಹುದು.