ರೇಡಿಯೊ ಚಿಕಿತ್ಸೆ
From Wikipedia, the free encyclopedia
ರೇಡಿಯೊ ಚಿಕಿತ್ಸೆಯು ವಿಕಿರಣಾಕರಗಳ ಬಳಕೆಯಿಂದ ಮಾಡುವ ರೋಗಚಿಕಿತ್ಸೆ (ರೇಡಿಯೊ ತೆರಪಿ). ವ್ಯಾವಹಾರಿಕವಾಗಿ, ದೇಹದ ನಿರ್ದಿಷ್ಟ ಭಾಗವನ್ನು ಅಯಾನೀಕರಿಸುವ ವಿಕಿರಣಕ್ಕೆ ಅಥವಾ ಊತಕಗಳ ಆಳಕ್ಕೆ ಇಳಿಯಬಲ್ಲ ಕಿರಣಗಳಿಗೆ ಒಡ್ಡಿ ರೋಗಯುಕ್ತ ಕೋಶಗಳನ್ನು ನಾಶಮಾಡುವ ಚಿಕಿತ್ಸೆ ಇದು. ವಿಕಿರಣಪಟು ಸಮಸ್ಥಾನಿಗಳು ಅಥವಾ ಕೃತಕವಾಗಿ ಉತ್ಪಾದಿಸಿದ ಎಕ್ಸ್ಕಿರಣಗಳು ವಿಕಿರಣದ ಆಕರಗಳು. ಕೆಲವು ಬಗೆಯ ಕ್ಯಾನ್ಸರ್ಗಳನ್ನು ಗುಣಪಡಿಸಲು, ಶಸ್ತ್ರಕ್ರಿಯಾನಂತರ ಕ್ಯಾನ್ಸರ್ ಮರುಕಳಿಸುವುದನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ಲಕ್ಷಣಗಳನ್ನು ನಿವಾರಿಸಲು ಈ ಚಿಕಿತ್ಸೆಯ ಬಳಕೆ ಉಂಟು. ರೇಡಿಯೊಚಿಕಿತ್ಸೆಯಲ್ಲಿ ಎರಡು ಬಗೆ: ಬಾಹ್ಯ ಅಥವಾ ದೂರ ಮತ್ತು ಆಂತರಿಕ.
ರೇಡಿಯೊ ಚಿಕಿತ್ಸೆಯು ಮಾರಣಾಂತಿಕವಲ್ಲದ ಸನ್ನಿವೇಶಗಳಲ್ಲಿ ಹಲವು ಅನ್ವಯಗಳನ್ನು ಹೊಂದಿದೆ. ಉದಾಹರಣೆಗೆ ಟ್ರೈಜೆಮಿನಲ್ ನ್ಯೂರಾಲ್ಜಿಯಾ, ಕಿವಿಕುಹರದ ನರಗೆಡ್ಡೆ, ತೀವ್ರತರದ ಥೈರಾಯ್ಡ್ ನೇತ್ರರೋಗ, ಟೆರಿಜಿಯಮ್, ವರ್ಣದ್ರವ್ಯವುಳ್ಳ ವಿಲೊನಾಡ್ಯುಲಾರ್ ಸಿನೋವೈಟಿಸ್ನ ಚಿಕಿತ್ಸೆಯಲ್ಲಿ ಮತ್ತು ಕೆಲಾಯ್ಡ್ ಗುರುತಿನ ಬೆಳವಣಿಗೆ, ನಾಳೀಯ ರೆಸ್ಟೆನೋಸಿಸ್ ಹಾಗೂ ವಿಷಮಸ್ಥಾನಿಕ ಅಸ್ಥೀಭವನದ ತಡೆಗಟ್ಟುವಿಕೆಯಲ್ಲಿ.[1][2][3][4]