ರತ್ನದ ಕಲ್ಲು
From Wikipedia, the free encyclopedia
ರತ್ನದ ಕಲ್ಲು ಅಥವಾ ರತ್ನ (ಇದನ್ನೊಂದು ಪ್ರಶಸ್ತ ಅಥವಾ ಅರೆ-ಪ್ರಶಸ್ತ ಶಿಲೆ , ಅಥವಾ ಅನರ್ಘ್ಯ ರತ್ನ ಎಂದೂ ಕರೆಯಲಾಗುತ್ತದೆ) ಎಂಬುದು ಆಕರ್ಷಕ ಖನಿಜದ ಒಂದು ತುಣುಕಾಗಿದ್ದು, ಇದನ್ನು ಯಥೋಚಿತವಾದ ರೀತಿಯಲ್ಲಿ ಕತ್ತರಿಸಿ ಹೊಳಪು ನೀಡಿ ರತ್ನಾಭರಣಗಳು ಅಥವಾ ಇತರ ಅಲಂಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ.[1] ಆದಾಗ್ಯೂ ಕೆಲವೊಂದು ಬಂಡೆಗಳು, (ಲೇಪಿಸ್-ಲಝುಲಿಯಂಥವು) ಮತ್ತು ಕಾರ್ಬನಿಕ ಮೂಲದ್ರವ್ಯಗಳು (ಪಳೆಯುಳಿಕೆ ರಾಳ ಅಥವಾ ಕಲ್ಲಿದ್ದಲಿನ ರೀತಿಯವು) ಖನಿಜಗಳಲ್ಲದಿದ್ದರೂ ಸಹ, ಅವನ್ನು ರತ್ನಾಭರಣಗಳಿಗಾಗಿ ಬಳಸಲಾಗುತ್ತದೆ, ಮತ್ತು ಈ ಕಾರಣದಿಂದಾಗಿ ಅವನ್ನೂ ಸಹ ರತ್ನದ ಕಲ್ಲುಗಳೆಂದು ಪರಿಗಣಿಸಲಾಗುತ್ತದೆ. ಬಹುಪಾಲು ರತ್ನದ ಕಲ್ಲುಗಳು ಗಡುಸಾಗಿರುತ್ತವೆ, ಆದರೆ ಕೆಲವೊಂದು ಮೃದುವಾದ ಖನಿಜಗಳನ್ನು ರತ್ನಾಭರಣಗಳಲ್ಲಿ ಬಳಸಲಾಗುತ್ತದೆ. ಈ ಮೃದುವಾದ ಖನಿಜಗಳು ಹೊಂದಿರುವ ಹೊಳಪು ಮತ್ತು ಸೌಂದರ್ಯ ಪ್ರಜ್ಞೆಯ ಮೌಲ್ಯವನ್ನುಳ್ಳ ಇತರ ಭೌತಿಕ ಗುಣಗಳೇ ಈ ಬಳಕೆಗೆ ಕಾರಣವೆನ್ನಬಹುದು. ರತ್ನದ ಕಲ್ಲಿನ ವಿರಳತೆ ಅಥವಾ ಅಪೂರ್ವತೆಯೂ ಸಹ ಮತ್ತೊಂದು ವಿಶಿಷ್ಟ ಲಕ್ಷಣವಾಗಿದ್ದು, ಅದು ರತ್ನದ ಕಲ್ಲಿಗೆ ಮೌಲ್ಯವನ್ನು ತಂದುಕೊಡುತ್ತದೆ. ರತ್ನಾಭರಣಗಳನ್ನು ಹೊರತುಪಡಿಸಿ, ಬಹಳ ಮುಂಚಿನ ಪ್ರಾಚೀನತೆಯಿಂದ ಮೊದಲ್ಗೊಂಡು 19ನೇ ಶತಮಾನದವರೆಗೆ ಅಲಂಕಾರಿಕ ಬಟ್ಟಲಿನಂಥ ಕೆತ್ತಲಾದ ರತ್ನಗಳು ಮತ್ತು ಗಡಸುಕಲ್ಲು ಕೆತ್ತನೆಗಳು ಸುಖವಿಲಾಸದ ಅಥವಾ ವೈಭವೋಪೇತವಾದ ಪ್ರಮುಖ ಕಲಾಸ್ವರೂಪಗಳಾಗಿದ್ದವು; ಕಾರ್ಲ್ ಫೆಬರ್ಜ್ನ ಕೆತ್ತನೆಗಳು ಈ ಸಂಪ್ರದಾಯದಲ್ಲಿ ಕೊನೆಯ ಗಮನಾರ್ಹ ಕೃತಿಗಳಾಗಿದ್ದವು.