ಯೂಗೀನ್ ಓ'ನೀಲ್
From Wikipedia, the free encyclopedia
ಯೂಗೀನ್ ಗ್ಲಾಡ್ಸ್ಟೋನ್ ಓ'ನೀಲ್ (ಅಕ್ಟೋಬರ್ ೧೬,೧೮೮೮-ನವೆಂಬರ್ ೨೭,೧೯೫೩) ಅಮೆರಿಕದ ನಾಟಕಕಾರ ಮತ್ತು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದವರು.ಇವರು ಅಮೆರಿಕದ ನಾಟಕ ರಂಗದಲ್ಲಿ ಹೊಸ ಅಲೆಯನ್ನು ತಂದವರು. ರಷ್ಯಾದ ಅಂಟೋನ್ ಚೆಕೋವ್,ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸೆನ್, ಸ್ವೀಡನ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್ಬರ್ಗ್ ರವರು ಉಪಯೋಗಿಸಿದ ವಾಸ್ತವಿಕತೆಯ ಹಲವು ತಂತ್ರಗಳನ್ನು ತನ್ನ ನಾಟಕದಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೇಕ್ಷಕರಿಗೆ ಪರಿಚರಿಯಸಿದರು. ಇವರ "ಲಾಂಗ್ ಡೇಸ್ ಜರ್ನಿ ಇನ್ ಟು ನೈಟ್" ಎಂಬ ನಾಟಕ ಟೆನ್ನಿಸ್ಸೀ ವಿಲಿಯಮ್ಸ್ರವರ ಎ ಸ್ಟ್ರೀಟ್ಕಾರ್ ನೇಮ್ಡ್ ಡಿಸೈರ್ ಮತ್ತು ಅರ್ಥರ್ ಮಿಲ್ಲರ್ರವರ ಡೆತ್ ಆಫ್ ಎ ಸೇಲ್ಸ್ಮ್ಯಾನ್ ನಾಟಕಗಳ ಜತೆಯಲ್ಲಿ ೨೦ನೆಯ ಶತಮಾನದ ಅಮೆರಿಕದ ಶ್ರೇಷ್ಠ ನಾಟಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.[1]
ಓ'ನೀಲ್ ರವರ ನಾಟಕಗಳು ಅಮೆರಿಕದ ದೇಶೀಯ ಸೊಗಡಿನ ಭಾಷೆಯನ್ನು ಉಪಯೋಗಿಸುತ್ತಿದ್ದು, ಸಮಾಜದ ಕಡೆಯ ವ್ಯಕ್ತಿಯ ಪಾತ್ರಗಳನ್ನೂ ಚಿತ್ರಿಸುತ್ತವೆ. ಈ ಪಾತ್ರಗಳು ತಮ್ಮ ಆಸೆ ಅಕಾಂಕ್ಷೆಗಳ ಈಡೇರಿಕೆಗೆ ಹೋರಾಡುತ್ತವೆಯಾದರೂ ಕೊನೆಗೆ ಭ್ರಮನಿರೆಸನ ಹೊಂದಿ ಹತಾಶವಾಗುತ್ತವೆ. ಇವರು ಬರೆದ ಹಾಸ್ಯ ನಾಟಕಗಳಲ್ಲಿ ಒಂದು ನಾಟಕ (ಆಹಾ,ವಿಲ್ಡರ್ನೆಸ್!)ಮಾತ್ರ ಯಶಸ್ವಿಯಾಗಿದೆ. ಬಾಕಿ ಉಳಿದ ಎಲ್ಲಾ ನಾಟಕಗಳು ಯಾವುದಾದರೂ ಒಂದು ಮಟ್ಟದ ದುರಂತ ಮತ್ತು ವಯುಕ್ತಿಕ ನಿರಾಶಾವಾದವನ್ನು ಒಳಗೊಂಡಿವೆ.