ಮೈಕೇಲ್ ಫ್ಯಾರಡೆ
ವಿದ್ಯುತ್ ಸಂಶೋಧಕ / From Wikipedia, the free encyclopedia
ಮೈಕೇಲ್ ಫ್ಯಾರಡೆ , FRS (22 ಸೆಪ್ಟೆಂಬರ್ 1791 – 25 ಆಗಸ್ಟ್ 1867) ಓರ್ವ ಇಂಗ್ಲಿಷ್ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾಗಿದ್ದು (ಅಥವಾ ಆ ಕಾಲದ ಪರಿಭಾಷೆಯಲ್ಲಿ ಹೇಳುವುದಾದರೆ ಭೌತಶಾಸ್ತ್ರಜ್ಞ ), ವಿದ್ಯುತ್ಕಾಂತತೆ ಹಾಗೂ ವಿದ್ಯುದ್ರಸಾಯನಶಾಸ್ತ್ರ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ.
ಒಂದು DC ವಿದ್ಯುತ್ ಪ್ರವಾಹವನ್ನು ಹೊತ್ತೊಯ್ಯುತ್ತಿರುವ ವಾಹಕವೊಂದರ ಸುತ್ತ ಇರುವ ಕಾಂತೀಯ ಕ್ಷೇತ್ರವನ್ನು ಫ್ಯಾರಡೆ ಅಧ್ಯಯನ ಮಾಡಿದ, ಮತ್ತು ಭೌತಶಾಸ್ತ್ರದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರದ ಪರಿಕಲ್ಪನೆಗೆ ಸಂಬಂಧಿಸಿದಂತಿರುವ ತಳಹದಿಯನ್ನು ಪ್ರಮಾಣೀಕರಿಸಿದ. ವಿದ್ಯುತ್ಕಾಂತೀಯ ಪ್ರೇರಣೆ, ಪಾರಕಾಂತೀಯತೆ, ಹಾಗೂ ವಿದ್ಯುದ್ವಿಚ್ಛೇದನದ ನಿಯಮಗಳನ್ನು ಅವನು ಆವಿಷ್ಕರಿಸಿದ. ಬೆಳಕಿನ ಕಿರಣಗಳ ಮೇಲೆ ಕಾಂತೀಯತೆಯು ಪ್ರಭಾವ ಬೀರಬಲ್ಲದು ಎಂಬುದನ್ನು ಹಾಗೂ ಈ ಎರಡೂ ವಿದ್ಯಮಾನಗಳ ನಡುವೆ ಒಂದು ಆಧಾರವಾಗಿರುವ ಸಂಬಂಧವಿದೆ ಎಂಬುದನ್ನು ಅವನು ಪ್ರಮಾಣೀಕರಿಸಿದ.[1][2] ಅವನ ವಿದ್ಯುತ್ಕಾಂತೀಯ ಆವರ್ತಕ ಸಾಧನಗಳ ಆವಿಷ್ಕಾರಗಳು ವಿದ್ಯುತ್ ಮೋಟಾರಿನ ತಂತ್ರಜ್ಞಾನದ ಬುನಾದಿಯಾಗಿ ಮಾರ್ಪಟ್ಟವು, ಮತ್ತು ತಂತ್ರಜ್ಞಾನದಲ್ಲಿನ ಬಳಕೆಗೆ ಸಂಬಂಧಿಸಿದಂತೆ ವಿದ್ಯುಚ್ಚಕ್ತಿಯು ಕಾರ್ಯಸಾಧ್ಯವಾಗಿ ಪರಿಣಮಿಸಿದ್ದರೆ ಅದಕ್ಕೆ ಹೆಚ್ಚಿನ ರೀತಿಯಲ್ಲಿ ಅವನ ಪ್ರಯತ್ನಗಳೇ ಕಾರಣ ಎನ್ನಬಹುದು.
ಓರ್ವ ರಸಾಯನ ಶಾಸ್ತ್ರಜ್ಞನಾಗಿ, ಮೈಕೇಲ್ ಫ್ಯಾರಡೆ ಬೆನ್ಜೀನ್ನ್ನು ಆವಿಷ್ಕರಿಸಿದ, ಕ್ಲೋರೀನ್ನ ಕ್ಲಾಥರೇಟ್ ಹೈಡ್ರೇಟ್ನ್ನು ಪತ್ತೆಹಚ್ಚಿದ, ಬುನ್ಸೆನ್ ಬರ್ನರಿನ ಒಂದು ಆರಂಭಿಕ ಪ್ರಕಾರ ಹಾಗೂ ಉತ್ಕರ್ಷಣ ಸಂಖ್ಯೆಗಳ ಪದ್ಧತಿಯನ್ನು ಆವಿಷ್ಕರಿಸಿದ, ಮತ್ತು ಧನ ವಿದ್ಯುದ್ವಾರ (ಆನೋಡ್), ಋಣ ವಿದ್ಯುದ್ವಾರ (ಕ್ಯಾಥೋಡ್), ವಿದ್ಯುದ್ವಾರ (ಇಲೆಕ್ಟ್ರೋಡ್), ಹಾಗೂ ಅಯಾನು ಇವೇ ಮೊದಲಾದ ಪಾರಿಭಾಷಿಕ ಪದಗಳನ್ನು ಜನಪ್ರಿಯಗೊಳಿಸಿದ.
ಫ್ಯಾರಡೆಯು ಅತ್ಯಲ್ಪ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡನಾದರೂ ಮತ್ತು ಕ್ಯಾಲ್ಕ್ಯುಲಸ್ನಂಥ ಉನ್ನತ ಗಣಿತಶಾಸ್ತ್ರದ ಕುರಿತು ಸೀಮಿತ ಜ್ಞಾನವನ್ನು ಹೊಂದಿದ್ದರೂ, ಅವನು ಇತಿಹಾಸದಲ್ಲಿನ ಅತ್ಯಂತ ಪ್ರಭಾವಿ ವಿಜ್ಞಾನಿಗಳಲ್ಲಿ ಒಬ್ಬನಾಗಿದ್ದ. ವಿಜ್ಞಾನದ ಕೆಲವೊಂದು ಇತಿಹಾಸಕಾರರು[3] ಅವನನ್ನು ವಿಜ್ಞಾನದ ಇತಿಹಾಸದಲ್ಲಿನ ಅತ್ಯುತ್ತಮ ಪ್ರಯೋಗ ಪರೀಕ್ಷಕ ಎಂದು ಉಲ್ಲೇಖಿಸುತ್ತಾರೆ.[4] ಧಾರಣಶಕ್ತಿಯ SI ಏಕಮಾನವಾದ ಫ್ಯಾರಡ್ನ್ನು ಅವನ ಹೆಸರಿನಲ್ಲಿ ನಾಮಕರಣ ಮಾಡಲಾಗಿದೆ; ಅದೇ ರೀತಿಯಲ್ಲಿ ಒಂದು ಮೋಲ್ನಷ್ಟು ಇಲೆಕ್ಟ್ರಾನುಗಳ (ಸುಮಾರು 96,485 ಕೂಲಾಮ್ಗಳು) ಮೇಲಿನ ವಿದ್ಯುದಾವೇಶಕ್ಕೆ ಫ್ಯಾರಡೆ ನಿಯತಾಂಕ ಎಂದು ಹೆಸರಿಸಲಾಗಿದೆ. ಫ್ಯಾರಡೆಯ ಚೋದನಾ ನಿಯಮವು ತಿಳಿಸುವ ಪ್ರಕಾರ, ಕಾಲಕ್ರಮೇಣ ಬದಲಾಗುತ್ತಿರುವ ಕಾಂತೀಯ ಪ್ರಸರವು ಒಂದು ಅನುಗುಣವಾದ ವಿದ್ಯುಚ್ಚಾಲಕ ಬಲವನ್ನು ಸೃಷ್ಟಿಸುತ್ತದೆ.
ದಿ ರಾಯಲ್ ಇನ್ಸ್ಟಿಟ್ಯೂಷನ್ ಆಫ್ ಗ್ರೇಟ್ ಬ್ರಿಟನ್ನಲ್ಲಿ ಫ್ಯಾರಡೆಯು ಮೊದಲ ಹಾಗೂ ಅಗ್ರಗಣ್ಯ ರಸಾಯನ ಶಾಸ್ತ್ರದ ಫುಲ್ಲೇರಿಯನ್ ಪ್ರಾಧ್ಯಾಪಕನಾಗಿದ್ದ, ಮತ್ತು ಈ ಸ್ಥಾನಕ್ಕೆ ಅವನನ್ನು ಆಜೀವ ಪರ್ಯಂತದ ಅವಧಿಗೆ ನೇಮಿಸಲಾಗಿತ್ತು.
ಆಲ್ಬರ್ಟ್ ಐನ್ಸ್ಟೀನ್ ತನ್ನ ಅಧ್ಯಯನ ಕೋಣೆಯ ಗೋಡೆಯ ಮೇಲೆ ಐಸಾಕ್ ನ್ಯೂಟನ್ ಹಾಗೂ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ರವರ ಚಿತ್ರಗಳ ಜೊತೆಜೊತೆಗೆ ಫ್ಯಾರಡೆಯ ಒಂದು ಛಾಯಾಚಿತ್ರವನ್ನು ಇರಿಸಿಕೊಂಡಿದ್ದ.[5]
ಕಟ್ಟಾ ಧಾರ್ಮಿಕ ವ್ಯಕ್ತಿಯಾಗಿದ್ದ ಫ್ಯಾರಡೆ ಸ್ಯಾಂಡೆಮ್ಯಾನಿಯನ್ ಚರ್ಚ್ನ ಓರ್ವ ಸದಸ್ಯನಾಗಿದ್ದ. ಇದು 1730ರಲ್ಲಿ ಸಂಸ್ಥಾಪಿಸಲ್ಪಟ್ಟ ಒಂದು ಕ್ರಿಶ್ಚಿಯನ್ ಪಂಗಡವಾಗಿದ್ದು, ಸಂಪೂರ್ಣ ವಿಶ್ವಾಸ ಹಾಗೂ ಬದ್ಧತೆಯನ್ನು ಬಯಸುತ್ತಿತ್ತು. "ಫ್ಯಾರಡೆಯ ಜೀವನ ಹಾಗೂ ಕೆಲಸದ ತುಂಬ ದೇವರು ಮತ್ತು ಪ್ರಕೃತಿಯ ಒಂದು ಪ್ರಬಲವಾದ ಏಕತಾಪ್ರಜ್ಞೆಯು ಆವರಿಸಿಕೊಂಡಿತ್ತು" ಎಂಬುದಾಗಿ ಕೆಲವು ಜೀವನಚರಿತ್ರೆಕಾರ ಉಲ್ಲೇಖಿಸಿದ್ದಾರೆ.[6]