ದ್ರವ್ಯ ಸ್ಥಿತಿ
ವಸ್ತುವಿನ (ದ್ರವ್ಯದ) ವಿವಿಧ ಹಂತಗಳು ತೆಗೆದುಕೊಳ್ಳುವ ವಿಭಿನ್ನ ರೂಪಗಳು / From Wikipedia, the free encyclopedia
ದಿನನಿತ್ಯ ನಾವು ನೋಡುವ, ಅನುಭವಿಸುವ ವಸ್ತುಗಳೆಲ್ಲವೂ ದ್ರವ್ಯಗಳು. ಕಲ್ಲು, ಮಣ್ಣು, ಗಣಕಯಂತ್ರ, ವಾಹನಗಳು, ಗಾಳಿ, ನೀರು ಇವೆಲ್ಲವೂ ದ್ರವ್ಯಗಳೇ; ಅರ್ಥಾತ್ ರಾಶಿಯನ್ನು ಹೊಂದಿರುವ ಮತ್ತು ಸ್ಥಳವನ್ನು ಅಕ್ರಮಿಸುವ ಎಲ್ಲವೂ ದ್ರವ್ಯಗಳು. ಈ ದ್ರವ್ಯಗಳು ಪಡೆದಿರುವ ವಿಶಿಷ್ಟ ರೂಪಗಳನ್ನೇ ದ್ರವ್ಯದಸ್ಥಿತಿಗಳು ಎಂದು ಕರೆಯಲಾಗುತ್ತದೆ. ಈ ದ್ರವ್ಯಗಳು ಸಾಮಾನ್ಯವಾಗಿ ನಾಲ್ಕು ಸ್ಥಿತಿಗಳಲ್ಲಿರುತ್ತವೆ ಎಂದರೇ ಮೂಲತಃ ನಾಲ್ಕು ದ್ರವ್ಯದ ಸ್ಥಿತಿಗಳಿವೆ, ಅವುಗಳೆಂದರೆ:- ಘನ, ದ್ರವ, ಅನಿಲ ಮತ್ತು ಪ್ಲಾಸ್ಮ. ಅದರಲ್ಲೂ, ಮನುಷ್ಯನಿಗೆ ಸುಲಭವಾಗಿ ಗೋಚರವಾಗುವ, ಅನುಭವಿಸಲು ಸಾಧ್ಯವಾಗುವ ದ್ರವ್ಯದ ಸ್ಥಿತಿಗಳು ಘನ, ದ್ರವ ಮತ್ತು ಅನಿಲ. ಗೋಚರ ವಿಶ್ವದಲ್ಲಿ ಅತಿ ಹೇರಳವಾಗಿ ಇರುವ ಸ್ಥಿತಿಯು ಪ್ಲಾಸ್ಮ ಸ್ಥಿತಿ.[1] ಆದರೆ ಇದು ಸಾಮಾನ್ಯವಾಗಿ ಮನುಷ್ಯನಿಗೆ ನೇರವಾಗಿ ಅನುಭವಕ್ಕೆ ನಿಲುಕುವುದಿಲ್ಲ. ಇದಲ್ಲದೆ ಅತಿ ವಿರಳ ಸನ್ನಿವೇಶಗಳಲ್ಲಿ ಕಂಡುಬರುವ ಇನ್ನೂ ಅನೇಕ ದ್ರವ್ಯಸ್ಥಿತಿಗಳಿವೆ. ಉದಾಹರಣೆಗೆ; ಬೋಸ್-ಐನ್ಸ್ಟೈನ್ ಕಂಡೆನ್ಸೇಟ್, ಫ಼ರ್ಮಿಯಾನಿಕ್ ಕಂಡೆನ್ಸೇಟ್, ನ್ಯೂಟ್ರಾನ್-ಶಿಥಿಲ ದ್ರವ್ಯ ಹೀಗೆ ಇನ್ನೂ ಕೆಲವು ದ್ರವ್ಯದ ಸ್ಥಿತಿಗಳು ಅಸ್ತಿತ್ವದಲ್ಲಿದ್ದು ಅಸಾಮಾನ್ಯವಾಗಿವೆ.
ದ್ರವ್ಯದ ಸ್ಥಿತಿಗಳನ್ನು ಅವುಗಳ ಗುಣ-ಲಕ್ಷಣಗಳ ಆಧಾರದ ಮೇಲೆ ವಿಭಾಗಿಸಲಾಗಿದೆ. ಘನಸ್ಥಿತಿಯಲ್ಲಿ ದ್ರವ್ಯವು ಸ್ಥಿರವಾದ ಅಳತೆ, ಆಕಾರವನ್ನು ಹೊಂದಿರುತ್ತದೆ ಮತ್ತು ಅಂಗಕಣಗಳು (ಅಣುಗಳು, ಪರಮಾಣುಗಳು ಅಥವಾ ಅಯಾನುಗಳು) ಒಂದಕ್ಕೊಂದು ಬಹಳ ಗಟ್ಟಿಯಾಗಿ ಜೋಡಣೆಗೊಂಡಿರುತ್ತವೆ. ದ್ರವಗಳು ಸ್ಥಿರವಾದ ಅಳತೆಯನ್ನು ಹೊಂದಿದ್ದು ಸ್ಥಿರವಾದ ಆಕಾರವನ್ನು ಹೊಂದಿರುವುದಿಲ್ಲ; ಅವು ತನನ್ನು ಇರಿಸಿದ ಪಾತ್ರೆಯ ಆಕಾರವನ್ನೇ ಪಡೆಯುತ್ತದೆ. ಅನಿಲಸ್ಥಿತಿಯ ಆಕಾರವಾಗಲೀ, ಅಳತೆಯಾಗಲೀ ಸ್ಥಿರವಲ್ಲ; ಇವು ತಮ್ಮನ್ನು ಇರಿಸಿದ ಪಾತ್ರೆಯನ್ನು ಸಾಧ್ಯವಾದಷ್ಟು ಆಕ್ರಮಿಸಿ ಅವುಗಳ ಆಕಾರ ಮತ್ತು ಅಳತೆಯನ್ನೇ ಪಡೆಯುತ್ತದೆ. ಪ್ಲಾಸ್ಮಸ್ಥಿತಿಯು ಅನಿಲದ ಹಾಗೆ ಅಳತೆ, ಆಕಾರಗಳು ಇರದ ದ್ರವ್ಯದ ಸ್ಥಿತಿಯಾಗಿದ್ದು ಈ ಸ್ಥಿತಿಯಲ್ಲಿ ತಟಸ್ಥ ಪರಮಾಣುಗಳ ಸಂಗಡ ಎಲೆಕ್ಟ್ರಾನುಗಳೂ, ಅಯಾನುಗಳೂ ಗಮನಾರ್ಹ ಸಂಖ್ಯೆಯಲ್ಲಿರುತ್ತವೆ.
ಸಾಮಾನ್ಯವಾಗಿ ಉಷ್ಣದ ಪುರೈಕೆಯಿಂದ ಘನವಸ್ತು ದ್ರವವಾಗಿ ದ್ರವವಸ್ತು ಅನಿಲವಾಗಿ ಮಾರ್ಪಾಡಾಗುವುದು. ಆದರೆ ಕರ್ಪೂರ, ಅಯೊಡೀನ್, ನವಸಾಗರ ಮುಂತಾದ ಘನವಸ್ತುಗಳನ್ನು ಕಾಯಿಸಿದಾಗ ಅವು ನೇರವಾಗಿ ಅನಿಲರೂಪ ಪಡೆಯುತ್ತವೆ.