ಕೈಗಾರಿಕಾ ಕ್ರಾಂತಿ
From Wikipedia, the free encyclopedia
ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.
೧೮ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿಂದ ಗ್ರೇಟ್ ಬ್ರಿಟನ್ನ ಕೆಲವು ಭಾಗಗಳಲ್ಲಿ ಮುಂಚಿನ ದೈಹಿಕ ದುಡಿಮೆ ಮತ್ತು ಭಾರಎಳೆಯುವ ಪ್ರಾಣಿ-ಆಧಾರಿತ ಆರ್ಥಿಕತೆಯಿಂದ ಯಂತ್ರ-ಆಧಾರಿತ ಉತ್ಪಾದನೆಯತ್ತ ಪರಿವರ್ತನೆ ಆರಂಭವಾಯಿತು. ವಸ್ತ್ರೋದ್ಯಮ ಕೈಗಾರಿಕೆಗಳ ಯಾಂತ್ರೀಕರಣ,ಕಬ್ಬಿಣ ತಯಾರಿಸುವ ತಂತ್ರಗಳ ಅಭಿವೃದ್ಧಿ ಮತ್ತು ಸಂಸ್ಕರಿತ ಕಲ್ಲಿದ್ದಲಿನ ಹೆಚ್ಚೆಚ್ಚು ಬಳಕೆಯಿಂದ ಕೈಗಾರಿಕಾ ಕ್ರಾಂತಿ ಆರಂಭವಾಯಿತು.[2] ಕಾಲುವೆಗಳು, ಸುಧಾರಿತ ರಸ್ತೆಗಳು ಮತ್ತು ರೈಲ್ವೆಗಳನ್ನು ಚಾಲ್ತಿಗೆ ತಂದಿದ್ದರಿಂದ ಮಾರಾಟ ವಿಸ್ತರಣೆ ಸಾಧ್ಯವಾಯಿತು. ಕಲ್ಲಿದ್ದಲು ಮುಖ್ಯ ಇಂಧನವಾದ ಉಗಿಶಕ್ತಿಪ್ರಾರಂಭ, ಜಲಚಕ್ರಗಳು ಮತ್ತು ಶಕ್ತಿಆಧಾರಿತ ಯಂತ್ರ(ಮುಖ್ಯವಾಗಿ ವಸ್ತ್ರೋದ್ಯಮ ತಯಾರಿಕೆಯಲ್ಲಿ)ಗಳ ವ್ಯಾಪಕ ಬಳಕೆಯಿಂದ ಉತ್ಪಾದನೆ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಪುಷ್ಠಿ ನೀಡಿತು.[3] ಸರ್ವ-ಲೋಹದ ಯಂತ್ರೋಪಕರಣಗಳನ್ನು ೧೯ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ್ದರಿಂದ ಇತರೆ ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಹೆಚ್ಚು ಉತ್ಪಾದನೆ ಯಂತ್ರಗಳ ತಯಾರಿಕೆಗೆ ಅವಕಾಶ ಒದಗಿಸಿತು. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದಾದ್ಯಂತ ೧೯ನೇ ಶತಮಾನದಲ್ಲಿ ಇದರ ಪ್ರಭಾವಗಳು ವಿಸ್ತರಿಸಿದವು. ತರುವಾಯ ವಿಶ್ವದ ಬಹುಭಾಗದಲ್ಲಿ ಪ್ರಭಾವ ಬೀರಿದ ಈ ಪ್ರಕ್ರಿಯೆಯು ಕೈಗಾರೀಕರಣವೆಂಬ ಹೆಸರಿನೊಂದಿಗೆ ಮುಂದುವರಿಯಿತು. ಕೈಗಾರೀಕರಣದಿಂದ ಸಮಾಜದ ಮೇಲೆ ಉಂಟಾದ ಬದಲಾವಣೆಯ ಪರಿಣಾಮ ಅಗಾಧವಾಗಿತ್ತು.[4]
ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.
ಕೈಗಾರಿಕಾ ಕ್ರಾಂತಿ ಆವರಿಸಿದ ಕಾಲಾವಧಿಯನ್ನು ವಿವಿಧ ಇತಿಹಾಸಕಾರರು ಭಿನ್ನವಾಗಿ ಗುರುತಿಸಿದ್ದಾರೆ. ಬ್ರಿಟನ್ನಲ್ಲಿ ೧೭೮೦ರ ದಶಕದಲ್ಲಿ ಇದು "ಹೊರಹೊಮ್ಮಿತು" ಮತ್ತು ೧೮೩೦ರ ದಶಕ ಅಥವಾ ೧೮೪೦ರ ದಶಕದವರೆಗೆ ಅದರ ಅನುಭವ ಸಂಪೂರ್ಣ ತಟ್ಟಲಿಲ್ಲ ಎಂದು ಇತಿಹಾಸಕಾರ ಎರಿಕ್ ಹಾಬ್ಸ್ಬಾಮ್ ಹೇಳಿದ್ದಾರೆ.[5] ಅದು ೧೭೬೦ ಮತ್ತು ೧೮೩೦ರ ಆಸುಪಾಸಿನಲ್ಲಿ ಸಂಭವಿಸಿತು ಎಂದು T.S.ಆಶ್ಟನ್ ಹೇಳಿದ್ದಾರೆ.[6] ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಕ್ರಮೇಣ ಸಂಭವಿಸಿತು ಮತ್ತು ಕ್ರಾಂತಿ ಎಂಬ ಪದವು ಈ ವಿದ್ಯಮಾನದ ನೈಜ ವಿವರಣೆಯಲ್ಲ ಎಂದು ೨೦ನೇ ಶತಮಾನದ ಇತಿಹಾಸಕಾರರಾದ ಜಾನ್ ಕ್ಲಾಪ್ಹ್ಯಾಮ್ ಮತ್ತು ನಿಕೋಲಾಸ್ ಕ್ರಾಫ್ಟ್ಸ್ ವಾದಿಸಿದ್ದಾರೆ. ಇತಿಹಾಸಕಾರರ ನಡುವೆ ಇದು ಇನ್ನೂ ಚರ್ಚಾಸ್ಪದ ವಸ್ತುವಾಗಿ ಉಳಿದಿದೆ.[7][8] ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕ ಬಂಡವಾಳಶಾಹಿ ಅರ್ಥವ್ಯವಸ್ಥೆ ಹೊರಹೊಮ್ಮುವುದಕ್ಕೆ ಮುಂಚಿತವಾಗಿ GDP ತಲಾದಾಯವು ಸ್ಥಿರವಾಗಿತ್ತು.[9] ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ಅರ್ಥಿಕತೆಗಳಲ್ಲಿ ತಲಾದಾಯದ ಆರ್ಥಿಕ ಪ್ರಗತಿ ಶಕೆ ಪ್ರಾರಂಭವಾಯಿತು.[10] ಕೈಗಾರಿಕಾ ಕ್ರಾಂತಿಯು ಇತಿಹಾಸದ ಅತೀ ಮುಖ್ಯ ವಿದ್ಯಮಾನಗಳಲ್ಲಿ ಒಂದೆಂದು ಇತಿಹಾಸಕಾರರು ಒಪ್ಪಿದ್ದಾರೆ.[11]