ಉತ್ತರ ಕೆರೊಲೀನ
From Wikipedia, the free encyclopedia
ಉತ್ತರ ಕೆರೊಲೀನ ಅಮೆರಿಕ ಸಂಯುಕ್ತಸಂಸ್ಥಾನದ ಆಗ್ನೇಯ ಭಾಗದಲ್ಲಿರುವ ಒಂದು ರಾಜ್ಯ. ಮೊಟ್ಟಮೊದಲು ಆ ಒಕ್ಕೂಟ ಸೇರಿದ 13 ರಾಜ್ಯಗಳಲ್ಲಿ ಇದೂ ಒಂದು; ಒಕ್ಕೂಟ ಸಂವಿಧಾನವನ್ನು ಸ್ಥಿರೀಕರಿಸಿದವುಗಳಲ್ಲಿ ಹನ್ನೆರಡನೆಯದು. ಉತ್ತರದಲ್ಲಿ ವರ್ಜೀನಿಯ, ಪೂರ್ವ ಆಗ್ನೇಯಗಳಲ್ಲಿ ಅಟ್ಲಾಂಟಿಕ್ ಸಾಗರ, ದಕ್ಷಿಣದಲ್ಲಿ ದಕ್ಷಿಣ ಕೆರೊಲೀನ ಮತ್ತು ಜಾರ್ಜಿಯ, ಪಶ್ಚಿಮ ವಾಯವ್ಯಗಳಲ್ಲಿ ಟೆನಿಸಿ ಇವೆ. ಉ.ಅ. 33° 50′ ಮತ್ತು 36° 35′ ಹಾಗೂ ಪ.ರೇ. 75° 28′ ಮತ್ತು 84° 19′ ನಡುವೆ ಇರುವ ಈ ರಾಜ್ಯದ ಪೂರ್ವ ಪಶ್ಚಿಮ ಪರಮಾವಧಿ ಉದ್ದ 805 ಕಿಮೀ. ವಿಸ್ತೀರ್ಣ 136420 ಚ.ಕಿಮೀ. ಜನಸಂಖ್ಯೆ : 8,049,313 (2000) ವಿಸ್ತಾರದಲ್ಲಿ ಇದು ಸಂಯುಕ್ತ ಸಂಸ್ಥಾನದಲ್ಲಿ 28ನೆಯದು. ಕೆರೊಲೀನ ಎಂದರೆ ಚಾರ್ಲ್ಸ್ ನ ದೇಶ. ಇಂಗ್ಲೆಂಡಿನ ದೊರೆ ಒಂದನೆಯ ಚಾರ್ಲ್ಸ್ನ ಗೌರವಾರ್ಥವಾಗಿ ಈ ಹೆಸರನ್ನು 1629ರಲ್ಲಿ ಮೊದಲು ಬಳಸಲಾಯಿತು, ರಾಜಧಾನಿಯ ಹೆಸರು ರ್ಯಾಲಿ-ಸರ್ ವಾಲ್ಟರ್ ರ್ಯಾಲಿಯ ಜ್ಞಾಪಕಾರ್ಥ.