ಆಂಟನ್ ಚೆಕೊವ್
From Wikipedia, the free encyclopedia
ಆಂಟನ್ ಪವ್ಲೋವಿಚ್ ಚೆಕೊವ್ (Russian: Антон Павлович Чехов, pronounced [ɐnˈton ˈpavləvʲɪtɕ ˈtɕɛxəf]; 29 January [O.S. 17 January] 1860 – 15 July [O.S. 2 July] 1904) ರಷ್ಯನ್ ಸಣ್ಣ ಕಥೆಗಾರ, ನಾಟಕಕಾರ ಹಾಗು ವೈದ್ಯ. ಇವರನ್ನು ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ಅತ್ಯುತ್ತಮ ಸಣ್ಣ ಕಥೆಗಾರನೆಂದು ಪರಿಗಣಿಸಲಾಗಿದೆ.[1] ನಾಟಕಕಾರರಾಗಿ ಅವರ ವೃತ್ತಿಜೀವನದಲ್ಲಿ ನಾಲ್ಕು ಪ್ರಸಿದ್ಧ ನಾಟಕಗಳನ್ನು ಬರೆದಿದ್ದಾರೆ ಹಾಗು ಅವರ ಅತ್ಯುತ್ತಮ ಸಣ್ಣ ಕಥೆಗಳಿಗೆ ಬರಹಗಾರರು ಹಾಗು ವಿಮರ್ಶಕರು ಅತೀವ ಮನ್ನಣೆಯನ್ನು ನೀಡುತ್ತಾರೆ.[2][3] ತಮ್ಮ ಸಾಹಿತ್ಯಕ ವೃತ್ತಿಜೀವನದುದ್ದಕ್ಕೂ ಚೆಕೊವ್ ಒಬ್ಬ ವೈದ್ಯನಾಗಿ ವೃತ್ತಿಯನ್ನು ಅನುಸರಿಸುತ್ತಾರೆ: ಒಂದೊಮ್ಮೆ ಅವರು "ವೈದ್ಯಶಾಸ್ತ್ರವು ನನ್ನ ನ್ಯಾಯಸಮ್ಮತ ಪತ್ನಿ" "ಹಾಗು ಸಾಹಿತ್ಯ ನನ್ನ ಉಪಪತ್ನಿ" ಎಂದು ಹೇಳುತ್ತಾರೆ.[4] 1896ರಲ್ಲಿ ದಿ ಸೀಗಲ್ ಗೆ ದೊರೆತ ಪ್ರತಿಕೂಲ ಸ್ವಾಗತದ ನಂತರ ಚೆಕೊವ್ ರಂಗಭೂಮಿಯನ್ನು ತ್ಯಜಿಸುತ್ತಾರೆ; ಆದರೆ 1898ರಲ್ಲಿ ಕಾನ್ಸ್ಟಾನ್ಟಿನ್ ಸ್ಟಾನಿಸ್ಲಾವ್ಸ್ಕಿ ಯ ಮಾಸ್ಕೋ ಆರ್ಟ್ ಥಿಯೇಟರ್ ನಲ್ಲಿ ನಾಟಕವು ಪ್ರಶಂಸೆ ಗಳಿಸುವ ಮಟ್ಟಕ್ಕೆ ಮರುಪ್ರದರ್ಶನ ಕಂಡಿತು. ಇದು ನಂತರ ಅಂಕಲ್ ವಾನ್ಯ ವನ್ನೂ ಸಹ ನಿರ್ಮಾಣ ಮಾಡಿತು ಜೊತೆಗೆ ಚೆಕೊವ್ ರ ಕಡೆ ಎರಡು ನಾಟಕಗಳಾದ ತ್ರೀ ಸಿಸ್ಟರ್ಸ್ ಹಾಗು ದಿ ಚೆರ್ರಿ ಆರ್ಚರ್ಡ್ ಗಳ ಪ್ರಥಮ ಪ್ರದರ್ಶನವನ್ನು ಏರ್ಪಡಿಸಿತು. ಈ ನಾಲ್ಕು ಕೃತಿಗಳು ನಟನಾ ತಂಡಕ್ಕೆ [5] ಹಾಗು ಪ್ರೇಕ್ಷಕರಿಗೆ ಸವಾಲನ್ನು ಒಡ್ಡುತ್ತವೆ, ಏಕೆಂದರೆ ಸಾಂಪ್ರದಾಯಿಕ ಶೈಲಿಗೆ ಬದಲಾಗಿ ಚೆಕೊವ್ "ಭಾವನೆಗಳ ನಾಟಕ" ಹಾಗು "ಕಥಾವಸ್ತುವಿನಲ್ಲಿ ಮುಳುಗಿದ ಜೀವನವನ್ನು"ಒದಗಿಸುತ್ತಾರೆ.[6] ಚೆಕೊವ್ ಮೊದಲು ಕಥೆಗಳನ್ನು ಕೇವಲ ಹಣಕ್ಕಾಗಿ ಬರೆದರು. ಆದರೆ ಅವರ ಕಲಾತ್ಮಕ ಮಹತ್ವಾಕಾಂಕ್ಷೆಯು ಹೆಚ್ಚಾಗುತ್ತಿದ್ದಂತೆ, ವಿಧ್ಯುಕ್ತವಾದ ಹೊಸ ನಾವೀನ್ಯಗಳನ್ನು ತಂದರು. ಇದು ಆಧುನಿಕ ಸಣ್ಣ ಕಥೆಯ ವಿಕಾಸಕ್ಕೆ ಪ್ರಭಾವ ಬೀರಿತು.[7] ಅವರ ಸ್ವೋಪಜ್ಞತೆಯು ನಿರೂಪಣಾ ವಿಧಾನ ತಂತ್ರದ ಆರಂಭಿಕ ಬಳಕೆಯನ್ನು ಒಳಗೊಂಡಿತ್ತು. ಇದನ್ನು ನಂತರದಲ್ಲಿ ಜೇಮ್ಸ್ ಜಾಯ್ಸ್ ಹಾಗು ಇತರ ಆಧುನಿಕತಾವಾದಿಗಳು ಸಾಂಪ್ರದಾಯಿಕ ಕಥಾ ರಚನೆಯಲ್ಲಿ ನೈತಿಕ ಅಂತ್ಯತೆಯ ನಿರಾಕರಣೆಯ ಸಂಯೋಜನೆಯೊಂದಿಗೆ ಅಳವಡಿಸಿಕೊಂಡರು.[8] ಇದು ಓದುಗರಿಗೆ ಒಡ್ಡುತ್ತಿದ್ದ ಕ್ಲಿಷ್ಟತೆಗಳಿಗೆ ಎಂದಿಗೂ ಅವರು ಕ್ಷಮೆಯಾಚಿಸುತ್ತಿರಲಿಲ್ಲ. ಒಬ್ಬ ಕಲಾವಿದನ ಕೆಲಸವೆಂದರೆ ಪ್ರಶ್ನೆಯನ್ನು ಹಾಕುವುದು, ಅವುಗಳಿಗೆ ಉತ್ತರಿಸುವುದಲ್ಲವೆಂದು ಪ್ರತಿಪಾದಿಸುತ್ತಿದ್ದರು.[9]